(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜೂ.23: ತೌಳವರು ಎಲ್ಲರೂ ಒಂದೆನ್ನುವ ಒಗ್ಗಟ್ಟು ಸಿನೇಮಾ ಮುಖೇನ ತೋರ್ಪಡಿಸುವ ಉದ್ದೇಶ ಈ ಚಲನಚಿತ್ರ ರಚನೆಯದ್ದಾಗಿದೆ. ಅದರಲ್ಲೂ ಸರ್ವ ಕಲಾವಿದರ ಪ್ರತಿಭೆಗಳನ್ನು ಒಂದೇ ಛಾವಣಿಯಡಿಯಲ್ಲಿ ಪ್ರದರ್ಶಿಸುವ ವೇದಿಕೆ ಇದಾಗಿದೆ. ತುಳುವಿನ ಒಗ್ಗಟ್ಟು ಪ್ರದರ್ಶನಕ್ಕೆ ಹೊಸ ವೇದಿಕೆ. ರಂಗ ಸಂಘಟನೆ ಮೂಲಕ ತುಳು ಭಾಷೆ, ಸಂಸ್ಕೃತಿಯನ್ನು ಜಾಗತಿಕವಾಗಿ ಪಸರಿಸುವ ಉದ್ದೇಶವೂ ನಮ್ಮದಾಗಿದೆ. ತುಳುನಾಡಿನ ಸಮಗ್ರ ಜನತೆ ಸ್ವೀಕರಿಸುವಂತಹ ಸಿನೇಮಾವಾಗಿ ಈ ಚಿತ್ರ ಮೂಡಿ ಬರುವ ಆಶಯ ನಮ್ಮದಾಗಿದೆ ಎಂದು ನಾಗೇಶ್ವರ ಸಿನಿ ಕಂಬೈನ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ, ಅಂಬರ್ ಕ್ಯಾಟರರ್ಸ್ ಸಿನೆಮಾ ನಿರ್ಮಾಪಕ ಕಡಂದಲೆ ಸುರೇಶ್ ಭಂಡಾರಿ ತಿಳಿಸಿದರು.
ನಾಗೇಶ್ವರ ಸಿನಿ ಕಂಬೈನ್ಸ್ ಸಂಸ್ಥೆಯ ಬ್ಯಾನರ್‍ನಡಿ ತನ್ನ ನಿರ್ಮಾಪಕತ್ವದಲ್ಲಿ ರೂಪಿಸಲು ಸಿದ್ಧವಾದ ಅಪರೂಪದ ಹಾಗೂ ಗಿನ್ನೆಸ್ ದಾಖಲೆಗೆ ಪಾತ್ರವಾಗುವ ನೂತನ ತುಳು ಸಿನೆಮಾದ ನಿಮಿತ್ತ ಮಂಗಳೂರು ವುಡ್‍ಲ್ಯಾಂಡ್ಸ್ ಹೊಟೇಲ್‍ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಸುರೇಶ್ ಭಂಡಾರಿ ಮಾತನಾಡಿದರು.
ನಾಗೇಶ್ವರ ಸಿನಿ ಕಂಬೈನ್ಸ್ ಅಂಬರ್ ಕ್ಯಾಟರರ್ಸ್ ಎಂಬ ಚಿತ್ರವನ್ನು ನಿರ್ಮಿಸಿದ್ದು, ಇದೀಗ ದ್ವಿತೀಯ ಚಿತ್ರ ನಿರ್ಮಾಣವನ್ನು ಸಪ್ಟೆಂಬರ್‍ನಲ್ಲಿ ಸೆಟ್ಟೇರಿಸಲಾಗುವುದು. ಹರೀಶ್ ಕೊಟ್ಪಾಡಿ ಅವರ ಕಥೆ-ಚಿತ್ರಕಥೆ, ಸಂಭಾಷಣೆ ಮತ್ತು ಸಂಕಲನದಲ್ಲಿ ಚಿತ್ರ ನಿರ್ಮಿಸಲಾಗುತ್ತಿದೆ. ಈ ತುಳುಚಿತ್ರವನ್ನು ಗಿನ್ನೆಸ್ ದಾಖಲೆಗೆ ಕೊಂಡೊಯ್ಯುವ ದೃಷ್ಟಿಯನ್ನಿಟ್ಟುಕೊಂಡು 17 ಗಂಟೆಯಲ್ಲಿ ಚಿತ್ರ ನಿರ್ಮಾಣವಾಗಲಿದ್ದು, 10 ತುಳು ಚಿತ್ರರಂಗದ ಯಶಸ್ವಿ ಚಿತ್ರ ನೀಡಿದ ನಿರ್ದೇಶಕರು ಈ ಚಿತ್ರವನ್ನು ಏಕಕಾಲದಲ್ಲಿ 17 ಗಂಟೆ ಕಾಲ ನಿರ್ದೇಶಿಸಲಿದ್ದು, 10 ನಾಯಕ ನಟರು ಅಭಿನಯಿಸಲಿದ್ದಾರೆ. ತುಳುವಿನ ಪ್ರಥಮ ಮಲ್ಟೀಸ್ಟಾರ್ ಚಿತ್ರ ಇದಾಗಲಿದ್ದು, 10ಕ್ಕಿಂತಲೂ ಹೆಚ್ಚಿನ ಕ್ಯಾಮರಾ ಬಳಕೆಯಾಗಲಿದ್ದು, 10ಕ್ಕಿಂತಲೂ ಮಿಕ್ಕಿದ ಲೊಕೇಶನ್‍ನಲ್ಲಿ ಚಿತ್ರೀಕರಿಸುವ ಯೋಜನೆ ಹಾಕಲಾಗಿದ್ದು, ತುಳು ರಂಗಭೂಮಿ ಹಾಗೂ ತುಳು ಚಿತ್ರರಂಗದ ಹೆಚ್ಚಿನ ನಟನಟಿಯರು ಅಭಿನಯಿಸುವ ವಿಭಿನ್ನ ಚಿತ್ರ ಇದಾಲಿದ್ದು, ವಿಭಿನ್ನ ಕಥಾ ಹಂದರವನ್ನು ಹೊಂದಿದೆ ಎಂದು ನಾಗೇಶ್ವರ ಸಿನಿ ಕಂಬೈನ್ಸ್‍ನ ನಿರ್ದೇಶಕ, ನಟ ಸೌರಭ್ ಎಸ್.ಭಂಡಾರಿ ನೂತನ ಚಿತ್ರದ ಬಗ್ಗೆ ಸ್ಥೂಲವಾದ ಮಾಹಿತಿಯನ್ನಿತ್ತರು.
ಪ್ರಸಿದ್ಧ ನಿರ್ದೇಶಕರಾದ ವಿಜಯ ಕುಮಾರ್ ಕೊಡಿಯಾಲ್‍ಬೈಲ್, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಪ್ರಕಾಶ್ ಪಾಂಡೇಶ್ವರ್, ಮಯೂರ್ ಶೆಟ್ಟಿ, ರಂಜಿತ್ ಸುವರ್ಣ, ರಾಜ್ ಕಮಲ್, ರಿತೇಶ್ ಬಂಗೇರ, ರಘು ಶೆಟ್ಟಿ ಮುಂತಾದ ನಿರ್ದೇಶಕರು ನಿರ್ದೇಶಿಸಲಿದ್ದು, ತುಳುನಾಡ ಚಕ್ರವರ್ತಿ ಅರ್ಜುನ್ ಕಾಪಿಕಾಡ್, ತೌಳವ ಸ್ಟಾರ್ ಸೌರಭ್ ಭಂಡಾರಿ, ರೂಪೇಶ್ ಶೆಟ್ಟಿ, ಪ್ರಥ್ವಿ ಅಂಬರ್, ಅಸ್ತಿಕ್ ಶೆಟ್ಟಿ, ನಾಯಕನಟರಾಗಿ ಅಭಿನಯಿಸಲಿರುವರು.
ಹೆಸರಾಂತ ಹಾಸ್ಯ ನಟರ ಸಮಾಗಮದೊಂದಿಗೆ ತಮಿಳು ಚಿತ್ರರಂಗದ ಧನುಷ್ ಅವರ ಪುಲಿಕುಟ್ಟಿ ಚಿತ್ರ ಖ್ಯಾತಿಯ ಸುಮಾರು 40 ಚಿತ್ರಗಳಲ್ಲಿ ಖಳನಾಯಕನಾಗಿ ಮಿಂಚಿದ ತಮಿಳು ಚಿತ್ರನಟ ರಾಜುಸಿಂಹ ಹಾಗೂ ಚೇತನ್ ರೈ ಮಾಣಿ ಖಳನಾಯಕನ ಪಾತ್ರ ನಿರ್ವಹಿಸಲಿದ್ದಾರೆ. ಉಳಿದ ಅನೇಕ ನಿರ್ದೇಶಕರ ಹಾಗೂ ನಾಯಕ ನಟರ ಮತ್ತು ಚಿತ್ರದ ಶಿರ್ಷಿಕೆಯ ವಿವರವನ್ನು ಶೀಘ್ರದಲ್ಲಿ ನೀಡಲಿದ್ದಾರೆ ಎಂದೂ ಸೌರಭ್ ಭಂಡಾರಿ ತಿಳಿಸಿದ್ದಾರೆ.
ಪತ್ರಿಕಾಘೋಷ್ಠಿಯಲ್ಲಿ ಮಾಧವ ಭಂಡಾರಿ ಕುಳೂರು, ಪಮ್ಮಿ ಕೋಡಿಯಾಲ್‍ಬೈಲ್, ರಾಜೇಶ್ ಬ್ರಹ್ಮವಾರ, ಪ್ರಕಾಶ್ ಪಾಂಡೇಶ್ವರ್, ಕೆ.ಅಶೋಕ್, ವಿಜಯಕುಮಾರ್ ಕೋಡಿಯಾಲ್‍ಬೈಲ್, ರಂಜಿತ್ ಸುವರ್ಣ, ಇಸ್ಮಾಯಲ್ ಮೂಡುಶೆಡ್ಡೆ, ಆದಿನಾಥ್ ಶೆಟ್ಟಿ, ಅರ್ಜುನ್ ಕಾಪಿಕಾಡ್, ಪೂಜಾ ಶೆಟ್ಟಿ, ಎಸ್.ಮಹೀರಾಜ್ ಮತ್ತಿತರರು ಉಪಸ್ಥಿತರಿದ್ದರು.