(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮಂಗಳೂರು, ನ.23: ಕಳೆದ ಮಂಗಳವಾರ ಮಂಗಳೂರು ಪುರಭವನದಲ್ಲಿ ನಡೆಸಲ್ಪಟ್ಟ ಪಿಂಗಾರ ರಾಜ್ಯೋತ್ಸವ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ಅವರು ಮುಂಬಯಿ ಅಲ್ಲಿನ ಕೊಡುಗೈದಾನಿ, ಸಮಾಜ ಸೇವಕ ಕಡಂದಲೆ ಸುರೇಶ್ ಎಸ್.ಭಂಡಾರಿ ಅವರ ಬಯೋಗ್ರಾಫಿ ಪುಸ್ತಕ ಬಿಡುಗಡೆ ಗೊಳಿಸಿ ಶುಭಾರೈಸಿದರು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ರೈ| ರೆ| ಡಾ| ಅಲೋಸಿಯಸ್ ಪಾವ್ಲ್ ಡಿ'ಸೋಜಾ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು ಸಚಿವ ಖಾದರ್ ಅವರು ಭಂಡಾರಿ ಬಯೋಗ್ರಾಫಿ ಪುಸ್ತಕ ಬಿಡುಗಡೆ ಗೊಳಿಸಿ ಮಾತನಾಡಿದರು.
ಭಂಡಾರಿ ಸಮಾಜವನ್ನು ಸರ್ವೋಭಿವೃದ್ಧಿಯ ಪಥದತ್ತ ಒಯ್ಯುತ್ತಾ ಅಖಂಡ ಸಮಾಜದ ಧೀಶಕ್ತಿ ಆಗಿರುವ ಕಡಂದಲೆ ಸುರೇಶ್ ಎಸ್.ಭಂಡಾರಿ ಇವರು ಜಾಗತಿಕ ಭಂಡಾರಿ ಸಮಾಜ ಸಂಸ್ಥೆಗಳ ಒಕ್ಕೂಟ ಭಂಡಾರಿ ಮಹಾ ಮಂಡಲ ಇದರ ಸಂಸ್ಥಾಪಕ ಅಧ್ಯಕ್ಷರಾಗಿ ಭಂಡಾರಿ ಸಮುದಾಯದ ಧೀಮಂತ ಧುರೀಣರಾಗಿದ್ದು, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಉಡುಪಿ ಇದರ ಆಡಳಿತ ಮೊಕ್ತೇಸರ ಮತ್ತು ಅಧ್ಯಕ್ಷರಾಗಿ, ಉದಾರ ದಾನಿ, ಸಮಾಜ ಸೇವಕರಾಗಿ ಗುರುತರಸೇವೆಯಲ್ಲಿ ತೊಡಗಿಸಿ ಕೊಂಡಿರುವುದು ಅಭಿನಂದನೀಯ. ಅಪತ್ಕಾಲದಲ್ಲಿ ಬಂಧುವಾಗಿ ಶ್ರಮಿಸುತ್ತಿರುವ ಇವರ ಸೇವೆ ಅಳೆಯಲಾಸಾಧ್ಯ. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎನ್ನುವ ಉದಾತ್ತ ಮನೋಭಾವ ಬೆಳೆಸಿರುವ ಸುರೇಶ್ ಭಂಡಾರಿ ಜೀವನಶೈಲಿ ಸರ್ವರಿಗೂ ಆದರನೀಯ ಇವರ ಜೀವನ ಚರಿತ್ರೆ ಕೃತಿರೂಪದಲ್ಲಿ ಅಚ್ಚದರೆ ಯುವಪೀಳಿಗೆಗೆ ಅನುಕರನೀಯ ಆಗಬಲ್ಲದು ಎಂದು ಕೇಮಾರು ಸಾಂದಿಪನಿ ಸಾಧನಾಶ್ರಮ ಕ್ಷೇತ್ರದ ಶ್ರೀ ಈಶ ವಿಠಲದಾಸ ಸ್ವಾಮಿಜಿ ಆಶೀರ್ವಚನ ನೀಡಿ ಮಾತನಾಡಿದರು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತ್ ಕರ್ನಾಟಕ ರಾಜ್ಯದ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ರೆ| ಫಾ| ಡೆನಿಸ್ ಮೊರಸ್ ಪ್ರಭು, ಫಾ| ವಿಲಿಯಂ ಮಿನೇಜಸ್, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಸಿ.ಜಿ ಪಿಂಟೋ, ಎಲಿಯಾಸ್ ಫೆರ್ನಾಂಡಿಸ್ ವೇದಿಕೆಯಲ್ಲಿ ಆಸೀನರಾಗಿದ್ದರು.
ಪಿಂಗಾರ ಸಾಪ್ತಾಹಿಕದ ಸಂಪಾದಕ, ಪ್ರಕಾಶಕ ರೇಮಂಡ್ ಡಿ'ಕುನ್ಹ್ಹಾ ತಾಕೋಡೆ ಸ್ವಾಗತಿಸಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೋಯ್ ಕಾಸ್ತೆಲಿನೋ ಪ್ರಸ್ತಾವಿಕ ನುಡಿಗಳನ್ನಾಡಿದರು. ಪಿಂಗಾರ ವ್ಯವಸ್ಥಾಪಕ ಸುನೀಲ್ ಡಿ'ಕುನ್ಹ್ಹಾ, ಕು| ರಿಯಾನಾ ಡಿ'ಕುನ್ಹ್ಹಾ ಮಾಧವ ಭಂಡಾರಿ ಮತ್ತಿತರ ಗಣ್ಯರು ಹಾಜರಿದ್ದು, ಸುರೇಖಾ ಎಳವರಾ ಕಾರ್ಯಕ್ರಮ ನಿರೂಪಿಸಿದರು. ನತಾಲಿಯಾ ಡಿ'ಕುನ್ಹ್ಹಾ ವಂದಿಸಿದರು.